ನೊಣಹಿಡುಕಗಳ ಗುರುತಿಸುವಿಕೆ: ನೆತ್ತರುಗಲ್ಲದ ನೊಣಹಿಡುಕ, ಬೂದು ನೆತ್ತರುಗಲ್ಲದ ನೊಣಹಿಡುಕ ಮತ್ತು ಕಾಶ್ಮೀರಿ ನೊಣಹಿಡುಕ
ಇದು ತರುಣ್ ಮೆನನ್ ಹಾಗೂ ಅಶ್ವಿನ್ ವಿಶ್ವನಾಥನ್ ಅವರು ಬರೆದ ಆಂಗ್ಲ ಲೇಖನದ ಕನ್ನಡ ಅನುವಾದ. ಅನುವಾದಕರು ಹರೀಶ ಎ. ಎಸ್
ನೆತ್ತರುಗಲ್ಲ ನೊಣಹಿಡುಕ (Red-breasted Flycatcher), ಬೂದು ನೆತ್ತರುಗಲ್ಲ ನೊಣಹಿಡುಕ (Taiga Flycatcher) ಮತ್ತು ಕಾಶ್ಮೀರಿ ನೊಣಹಿಡುಕಗಳು (Kashmir Flycatcher) ಫಿಸೆಡುಲಾ (Ficedula) ಎಂಬ ಪ್ರಬೇಧಕ್ಕೆ ಸೇರಿರುತ್ತವೆ. ಈ ಮೂರು ನೊಣಹಿಡುಕಗಳು ನೋಡಲು ಒಂದೇ ರೀತಿ ಕಾಣುವುದರಿಂದ ಸಹಜವಾಗಿ ವೀಕ್ಷಕರನ್ನು ಗೊಂದಲಕ್ಕೀಡು ಮಾಡುತ್ತವೆ. ಆರಂಭದಲ್ಲಿ, ಎಲ್ಲಾ ಮೂರು ಜಾತಿಯ ನೊಣಹಿಡುಕಗಳನ್ನು ನೆತ್ತರುಗಲ್ಲ ನೊಣಹಿಡುಕದ ಉಪಜಾತಿಗಳೆಂದೇ ಪರಿಗಣಿಸಲಾಗಿತ್ತು, ಈಗ ಬೇರೆ ಬೇರೆ ಜಾತಿಯವು. ಇತ್ತೀಚಿಗಿನ ಆಣ್ವಿಕ ಸಂಶೋಧನೆಯು ಇವೆಲ್ಲವೂ ಒಂದೇ ಸೋದರಿಯ ಗುಂಪಿಗೆ ಸೇರಿದ್ದವೆಂದು ಅದನ್ನು ತೋರಿಸುತ್ತದೆ, ಅಂದರೆ ಇವೆಲ್ಲವುದರ ಇತ್ತೀಚಿಗಿನ ಮೂಲ ಪೂರ್ವಜರು ಒಂದೇ ಎಂದು ಅರ್ಥ.
ಈ ಮೂರು ಜಾತಿಯ ನೊಣಹಿಡುಕಗಳನ್ನು ಅದೇ ತರಹ ಮೇಲ್ನೋಟಕ್ಕೆ ಕಾಣುವ ಕಂದು ನೊಣಹಿಡುಕ ಮತ್ತು ಕಂದು ಎದೆಯ ನೊಣಹಿಡುಕಗಳಿಂದ, ಅವುಗಳ ಕಪ್ಪು ಬಾಲದ, ಬಿಳಿ ಬಣ್ಣದ ಬದಿಗಳಿಂದ ಮತ್ತು ಆಗಾಗ್ಗೆ ತನ್ನ ಬಾಲವನ್ನು ಮೇಲಕ್ಕೆ ಎತ್ತಿ ನಿಲ್ಲಿಸುವ ಪ್ರವೃತ್ತಿಯಿಂದ (Cocking) ಪ್ರತ್ಯೇಕಿಸಬಹುದು. ಆದರೂ ನೀವು ನೋಡಿರುವಂತೆ ಈ ಮೂರು ಜಾತಿಯ ನೊಣಹಿಡುಕಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಬಹು ಕಷ್ಟದ ಕೆಲಸ. ಈ ನೊಣಹಿಡುಕಗಳ ವಯಸ್ಕ ಗಂಡುಗಳನ್ನು ಗುರುತಿಸುವುದು ಸುಲಭವಾಗಿದ್ದರೂ ಹೆಣ್ಣು ಮತ್ತು ಮೊದಲ ವರ್ಷದ ಹಕ್ಕಿಗಳನ್ನು ಪ್ರತ್ಯೇಕಿಸುವುದು ಅಷ್ಟು ಸುಲಭವಲ್ಲ.
ಬೂದು ನೆತ್ತರುಗಲ್ಲದ ನೊಣಹಿಡುಕವು ಈ ಮೂರು ನೊಣಹಿಡುಕಗಳಲ್ಲಿ ಸಾಮಾನ್ಯವಾಗಿರುವ ಬಾಲವನ್ನು ವೇಗವಾಗಿ ಮೇಲಕ್ಕೆ ಎತ್ತಿ ಹಿಡಿಯುವ ನಡವಳಿಕೆಯನ್ನು ಪ್ರದರ್ಶಿಸುತ್ತಿರುವುದು.
ವ್ಯಾಪ್ತಿ:
ನೆತ್ತರುಗಲ್ಲದ ನೊಣಹಿಡುಕವು ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಸಂತಾನೋತ್ಪತ್ತಿ ಮಾಡಿದರೆ, ಬೂದು ನೆತ್ತರುಗಲ್ಲದ ನೊಣಹಿಡುಕವು ಪೂರ್ವ ಮತ್ತು ಮಧ್ಯ ಏಷ್ಯಾದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ, ಆದರೆ ಕಾಶ್ಮೀರಿ ನೊಣಹಿಡುಕದ ಸಂತಾನೋತ್ಪತ್ತಿ ಪ್ರದೇಶವು ತುಂಬಾ ಸೀಮಿತವಾಗಿದ್ದು ಕಾಶ್ಮೀರದ ಪಶ್ಚಿಮ ಹಿಮಾಲಯ ಮತ್ತು ಪಾಕಿಸ್ತಾನದ ಈಶಾನ್ಯ ಭಾಗಗಳಲ್ಲಿ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ. ಈ ಮೂರು ಜಾತಿಯ ನೊಣಹಿಡುಕಗಳ ಸಂತಾನೋತ್ಪತ್ತಿ ಪ್ರದೇಶವು ಬೇರೆ ಬೇರೆಯಾದ ಹೊರತಾಗಿಯೂ ಇವು ತಮ್ಮ ಚಳಿಗಾಲವನ್ನು ಕಳೆಯಲು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಭಾರತದ ದಕ್ಷಿಣ ಪ್ರಸ್ಥಭೂಮಿಗೆ ಬರುತ್ತವೆ. ಈ ಸಮಯದಲ್ಲಿ ಸಾಮಾನ್ಯವಾಗಿ ಒಂದೇ ಪ್ರದೇಶದಲ್ಲಿ ಈ ಮೂರು ಜಾತಿಯ ನೊಣಹಿಡುಕಗಳನ್ನು ಕಾಣಬಹುದು. ಈ ಮೂರು ಜಾತಿಯ ನೊಣಹಿಡುಕಗಳ ಸಂತಾನೋತ್ಪತ್ತಿ ಪ್ರದೇಶ ಮತ್ತು ಅವು ವಲಸೆ ಬರುವ ಪ್ರದೇಶಗಳ ನಡುವಿನ ವ್ಯತ್ಯಾಸವನ್ನು ಈ ಕೆಳಗಿನ ನಕ್ಷೆಯಲ್ಲಿ ವಿವರವಾಗಿ ತೋರಿಸಿರುವುದನ್ನು ಕಾಣಬಹುದು.
ಬೂದು ನೆತ್ತರುಗಲ್ಲದ ಮತ್ತು ನೆತ್ತರುಗಲ್ಲದ ನೊಣಹಿಡುಕಗಳು ಚಳಿಗಾಲದ ವಲಸೆ ಕಾಲದಲ್ಲಿ ಒಂದೇ ರೀತಿಯ ಆವಾಸಸ್ಥಾನಗಳನ್ನು ಹಂಚಿಕೊಳ್ಳುತ್ತವೆ ಆದರೆ ಬೂದು ನೆತ್ತರುಗಲ್ಲವು ಪೂರ್ವ ಈಶಾನ್ಯ ಭಾರತದ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ (ಆದರೆ ನೆತ್ತರುಗಲ್ಲವು ತುಂಬಾ ವಿರಳವಾಗಿ ಕಾಣಿಸಿಕೊಳ್ಳುತ್ತದೆ). ನೆತ್ತರುಗಲ್ಲದ ನೊಣಹಿಡುಕವು ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ (ಬೂದು ನೆತ್ತರುಗಲ್ಲದ ನೊಣಹಿಡುಕವು ಕೂಡ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ). ಕಾಶ್ಮೀರಿ ನೊಣಹಿಡುಕವನ್ನು, ಚಳಿಗಾಲವನ್ನು ಕಳೆಯಲು ದಕ್ಷಿಣ ಭಾರತಕ್ಕೆ ವಲಸೆ ಬರುವಾಗ ಉತ್ತರ ಮತ್ತು ಮಧ್ಯಭಾರತದಲ್ಲಿ ಅವು ಹಾದು ಹೋಗುವ ಸಮಯದಲ್ಲಿ ಕಾಣಬಹುದು. ಇವು ದಕ್ಷಿಣ ಭಾರತದ ಎತ್ತರದ ಪ್ರದೇಶಗಳಾದ ನೀಲಗಿರಿ ಬೆಟ್ಟಗಳು (ಇಲ್ಲಿ ಮೂರು ಜಾತಿಯ ನೊಣಹಿಡುಕಗಳನ್ನು ಕಾಣಬಹುದು) ಮತ್ತು ಶ್ರೀಲಂಕಾದಲ್ಲಿ ತಂಗಲು ಬಯಸುತ್ತವೆ. ಒಂದು ವೇಳೆ ನೀವು ಬಂಗಾಳದ ಪೂರ್ವ ಭಾಗದಲ್ಲಿ ಈ ಯಾವುದಾದರೂ ನೊಣಹಿಡುಕವನ್ನು ಕಂಡರೆ ಅದು ಬೂದು ನೆತ್ತರುಗಲ್ಲದ ನೊಣಹಿಡುಕವಾಗಿರುವ ಸಾಧ್ಯತೆ ಹೆಚ್ಚು. ಅದೇ ರೀತಿ ಸಂತಾನೋತ್ಪತ್ತಿ ಕಾಲದಲ್ಲಿ ಕಾಶ್ಮೀರದ ಭಾಗದಲ್ಲಿ ಯಾವುದಾದರೂ ನೊಣಹಿಡುಕವನ್ನು ಕಂಡರೆ ಅದು ಕಾಶ್ಮೀರಿ ನೊಣಹಿಡುಕವೇ ಆಗಿರಬೇಕು.
ಗುರುತಿಸುವಿಕೆ:
ನೆತ್ತರುಗಲ್ಲದ ನೊಣಹಿಡುಕ ಮತ್ತು ಬೂದು ನೆತ್ತರುಗಲ್ಲದ ನೊಣಹಿಡುಕ
ಕೊಕ್ಕು:
ಬೂದು ನೆತ್ತರುಗಲ್ಲದ ನೊಣಹಿಡುಕದ ಕೊಕ್ಕು ಪೂರ್ತಿಯಾಗಿ ಕಪ್ಪು ಬಣ್ಣದ್ದಾಗಿರುತ್ತದೆ, ಆದರೆ ನೆತ್ತರುಗಲ್ಲದ ಕೊಕ್ಕಿನ ಬಣ್ಣವು ಪೂರ್ತಿ ಕಪ್ಪಾಗಿರಬಹುದು (ಬೂದು ನೆತ್ತರುಗಲ್ಲದಂತೆ) ಅಥವಾ ತೆಳುವಾಗಿರಬಹುದು.
ಗರಿಪುಕ್ಕಗಳು (Plumage):
ಸಂತಾನೋತ್ಪತ್ತಿ ಕಾಲದಲ್ಲಿ ವಯಸ್ಕ ಗಂಡು ಹಕ್ಕಿಗಳನ್ನು ಅವುಗಳ ಗಂಟಲು ಮತ್ತು ಎದೆಯ ಮೇಲಿನ ಕೆಂಪು ಬಣ್ಣದ ಪ್ರಮಾಣದಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಬೂದು ನೆತ್ತರುಗಲ್ಲ ನೊಣಹಿಡುಕದ (ಕೆಂಪು ಗಂಟಲಿನ ನೊಣಹಿಡುಕ ಎಂತಲೂ ಕರೆಯುತ್ತಾರೆ) ಗಂಟಲು ಹೆಚ್ಚು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಅನೇಕ ವೇಳೆ (ಆದರೆ ಯಾವಾಗಲೂ ಅಲ್ಲ) ಕೆನೆ ಬಣ್ಣದ ಹೊಟ್ಟೆಯು ಎದೆ ಭಾಗದ ಬೂದು ಪಟ್ಟಿಯಿಂದ ಬೇರ್ಪಡಿಸಲಾಗಿರುತ್ತದೆ. ನೆತ್ತರುಗಲ್ಲದ ನೊಣಹಿಡುಕವು ಬೂದು ಬಣ್ಣದ ನೆತ್ತರುಗಲ್ಲದಂತಲ್ಲದೇ ಗಂಟಲಿನ ಕೆಂಪು ಬಣ್ಣವು ಎದೆಯ ಮೇಲೆಲ್ಲಾ ವಿಸ್ತರಿಸಿ, ಅದು ಹೊಟ್ಟೆಯ ಬಳಿ, ಬಿಳಿ ಬಣ್ಣದೊಂದಿಗೆ ಲೀನವಾಗುತ್ತದೆ.
ಸಂತಾನಭಿವೃದ್ಧಿ ಅಲ್ಲದ ಅವಧಿಯಲ್ಲಿ ನೆತ್ತರುಗಲ್ಲ ನೊಣಹಿಡುಕದ ಗಂಟಲು ಮತ್ತು ಎದೆಯ ಮೇಲೆ ಕೆಂಪು ಬಣ್ಣವನ್ನು ಹೊಂದಿರುತ್ತದೆ, ಆದರೆ ಅದೇ ಸಮಯಕ್ಕೆ ಬೂದು ನೆತ್ತರುಗಲ್ಲ ನೊಣಹಿಡುಕವು ತನ್ನ ಕೆಂಪು ಗಂಟಲನ್ನು ಕಳೆದುಕೊಳ್ಳುತ್ತದೆ. ಸಂತಾನೋತ್ಪತ್ತಿ ಅಲ್ಲದ ಕಾಲದಲ್ಲಿ ನೆತ್ತರುಗಲ್ಲ ನೊಣಹಿಡುಕ ಮೇಲ್ನೋಟಕ್ಕೆ ಸಂತಾನೋತ್ಪತ್ತಿ ಮಾಡುವ ಬೂದು ನೆತ್ತರುಗಲ್ಲ ನೊಣಹಿಡುಕವನ್ನು ಹೋಲುತ್ತದೆ, ಆದರೆ ನೆನಪಿರಲಿ ಸಂತಾನೋತ್ಪತ್ತಿ ಮಾಡದ ಕಾಲದಲ್ಲಿ ಗಂಡು ಬೂದು ನೆತ್ತರುಗಲ್ಲ ಗಂಟಲಿನ ಮೇಲೆ ಕೆಂಪು ಬಣ್ಣವನ್ನು ಕಳೆದುಕೊಂಡು ಹೆಣ್ಣು ಹಕ್ಕಿಗಳನ್ನು ಹೋಲುತ್ತವೆ.
ಸಾಮಾನ್ಯವಾಗಿ ತಮ್ಮ ಸಂತಾನೋತ್ಪತ್ತಿ ಕಾಲಕ್ಕೆ ಹೊಂದುವಂತೆ ಫೆಬ್ರವರಿಯ ವೇಳೆಗೆ ಗರಿಪುಕ್ಕಗಳ ಬಣ್ಣ ಬದಲಾಯಿಸಿ ಕೆಂಪು ಬಣ್ಣದ ಗಂಟಲನ್ನು ಹೊಂದಿರುತ್ತವೆ. ಆದ್ದರಿಂದ, ನೀವು ಅಕ್ಟೋಬರ್ ಮತ್ತು ಜನವರಿ ನಡುವೆ ಯಾವುದಾದರೂ ಕೆಂಪು ಗಂಟಲಿನ ಹಕ್ಕಿಯನ್ನು ನೋಡಿದರೆ ಅದು ನೆತ್ತರುಗಲ್ಲದ ನೊಣಹಿಡುಕವೆಂದೇ ವಿಶ್ವಾಸದಿಂದ ಹೇಳಬಹುದು ಮತ್ತು ನೆತ್ತರುಗಲ್ಲ ನೊಣಹಿಡುಕದ ಎದೆಯ ಭಾಗವು ಸಂಪೂರ್ಣ ಬೂದು ಪಟ್ಟಿ ಹೊಂದಿರುವುದಿಲ್ಲ, ಆದರೆ ಇದನ್ನು ಬೂದು ನೆತ್ತರುಗಲ್ಲ ನೊಣಹಿಡುಕದಲ್ಲಿ ಕಾಣಬಹುದಾಗಿದೆ (ಆದರೂ ಇದು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ)
ಕೆಂಪು ಬಣ್ಣ ಹೊಂದಿರದ ಯಾವುದೇ ಪಕ್ಷಿಯನ್ನು ನೀವು ನೋಡಿದರೆ (ಅದು ಹೆಣ್ಣು, ಯುವ ವಯಸ್ಕ ಗಂಡು ಅಥವಾ ಸಂತಾನೋತ್ಪತ್ತಿ ಮಾಡದ ಬೂದು ನೆತ್ತರುಗಲ್ಲದ ಗಂಡು ಆಗಿರಬಹುದು. ಈ ರೀತಿಯ ಗರಿಪುಕ್ಕ ಹೊಂದಿರುವ ಹಕ್ಕಿಗಳನ್ನು ‘ಹೆಣ್ಣು ಪ್ರಕಾರ’ ಎಂದು ಕರೆಯಲಾಗುತ್ತದೆ), ಅದರ ಅತಿ ಉದ್ದದ (ಮಧ್ಯದ) ಮೇಲ್ಭಾಗದ ಹೊದಿಕೆಗಳಿಂದ (Coverts) ಇವುಗಳನ್ನು ಗುರುತಿಸುವಲ್ಲಿ ಸಹಾಯಕಾರಿಯಾಗಿರುತ್ತವೆ, ಇವು ಕುಂಡಿಯ ಮೇಲ್ಭಾಗದ ಬಾಲದಲ್ಲಿರುವ ಗರಿಗಳು. ನೆತ್ತರುಗಲ್ಲ ನೊಣಹಿಡುಕದ ತೋಕೆಯ ಮೇಲ್ಭಾಗವು (Rump) ಕಂದು-ಬೂದು ಮೇಲ್ಭಾಗದ ಹೊದಿಕೆಗಳನ್ನು ಹೊಂದಿರುತ್ತದೆ, ಅದು ಸಾಮಾನ್ಯವಾಗಿ ಸ್ವಲ್ಪ ಅದೇ ತೆರೆನಾದ ತೆಳು ಬಣ್ಣವನ್ನು ಹೊಂದಿರುತ್ತದೆ ಅಥವಾ ಅದರ ಬಾಲದಂತೆಯೇ ಇರುತ್ತದೆ, ಆದರೆ ಬೂದು ನೆತ್ತರುಗಲ್ಲದ ಬಹುತೇಕ ಬಾಲದ ಮೇಲ್ಭಾಗವು ಗಾಢ ಕಪ್ಪು ಮತ್ತು ಅದರ ಬಾಲಕ್ಕಿಂತ ಗಾಢವಾದ ಬಣ್ಣದ್ದಾಗಿರುತ್ತದೆ.
ನೆತ್ತರುಗಲ್ಲ ನೊಣಹಿಡುಕದ (ಮೇಲಿನ ಸಾಲು) ತೋಕೆಯ ಮೇಲ್ಭಾಗದ ಹೊದಿಕೆಯನ್ನು ಗಮನಿಸಿ, ಇದು ಕಂದು ಬೂದು ಬಣ್ಣದ್ದಾಗಿರುತ್ತದೆ ಮತ್ತು ಬೂದು ನೆತ್ತರುಗಲ್ಲದ ನೊಣಹಿಡುಕದ (ಕೆಳ ಸಾಲು) ಅದೇ ಭಾಗವು ಗಾಢ ಬಣ್ಣದ್ದಾಗಿರುತ್ತದೆ. ಅಲ್ಲದೆ, ಕೆಳಗಿನ ಸಾಲಿನಲ್ಲಿರುವ ಎಲ್ಲಾ ಬೂದು ನೆತ್ತರುಗಲ್ಲದ ನೊಣಹಿಡುಕ ಗಾಢ ಬಣ್ಣದ ಕೊಕ್ಕನ್ನು ಹೊಂದಿರುತ್ತವೆ. ಆದರೆ ಮೇಲಿನ ಸಾಲಿನಲ್ಲಿರುವ ಎಲ್ಲಾ ನೆತ್ತರುಗಲ್ಲದ ನೊಣಹಿಡುಕಗಳು ತೆಳು-ಬಣ್ಣದ ಕೊಕ್ಕನ್ನು ಹೊಂದಿಲ್ಲ ಎಂಬುದನ್ನು ಗಮನಿಸಿ! (Credits-clockwise from above: Mittal Gala, Sandip Das, Sriram Reddy, Renuka Vijayraghavan, Ian Burgess, Priyam Chathopadhyay)
ಸೂಚನೆ: ಹೆಣ್ಣು ಪ್ರಕಾರಗಳನ್ನು ಗುರುತಿಸಲು ಬಳಸಲಾಗುವ ಸುಳಿವುಗಳನ್ನು ಈ ಲೇಖನದಲ್ಲಿ ಬಿಡಲಾಗಿದೆ. ಏಕೆಂದರೆ ಅವುಗಳ ನಡುವಿನ ವ್ಯತ್ಯಾಸ ಬಹಳ ಸೂಕ್ಷ್ಮ.
ಕರೆ:
ಹೆಣ್ಣು ಪ್ರಕಾರಗಳನ್ನು ಪ್ರತ್ಯೇಕಿಸಲು ಕರೆಯು ಅತ್ಯುತ್ತಮ ಮಾರ್ಗವಾಗಿದೆ. ಚಳಿಗಾಲದಲ್ಲಿ ಅವು ತಂಗುವ ಜಾಗವನ್ನು ರಕ್ಷಿಸುವ ಸಲುವಾಗಿ ಮತ್ತು ಸಂದಿಗ್ದತೆಗಳಿಂದ ಕಾಪಾಡಿಕೊಳ್ಳಲು ಎರಡೂ ನೊಣಹಿಡುಕಗಳು ಆಗಾಗ್ಗೆ ಕೂಗುತ್ತಾ ಮತ್ತು ಬಾಲವನ್ನು ಅಲುಗಾಡಿಸುತ್ತಿರುತ್ತವೆ. ಎರಡು ಜಾತಿಯ ನೊಣಹಿಡುಕಗಳು ಒಂದೇ ತರವಾದ ಸ್ಥರ ಅಥವಾ ಧ್ವನಿಯ ಕರೆಗಳಾಗಿರುತ್ತವೆ. ನೆತ್ತರುಗಲ್ಲ ನೊಣಹಿಡುಕದ ಕರೆಯು ‘ಟ್ರ್ರ್ರ್ ಟ್ರ್ರ್ರ್’ ನಂತೆ (“trrrrr”) ಧ್ವನಿಸುತ್ತದೆ, ಅಲ್ಲಿ ಪ್ರತಿಯೊಂದು ಸ್ವರವು ಮಾನವನಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಬೂದು ನೆತ್ತರುಗಲ್ಲ ನೊಣಹಿಡುಕವು ಹೋಲಿಕೆಯಲ್ಲಿ ವೇಗವಾದ ಬಡಬಡಿಕೆಯನ್ನು ಹೊಂದಿದೆ. ಇದು ಪ್ರತ್ಯೇಕ ಸ್ವರಗಳನ್ನು ಗ್ರಹಿಸದೆ ದೀರ್ಘ ನಿರಂತರ ‘ಡ್ರ್ರ್ರ್ರ್ಟ್’ ನಂತೆ (“drrrrrt”) ಧ್ವನಿ ಕೇಳಿಸುತ್ತವೆ. ಕೆಳಗಿನ ದ್ವನಿ ಮತ್ತು ರೋಹಿತ ರೇಖೆಗಳು ಮೇಲೆ ತಿಳಿಸಿರುವ ಅಂಶಗಳನ್ನು ಪುಷ್ಟೀಕರಿಸುತ್ತವೆ. ಎರಡು ಜಾತಿಯ ಹಕ್ಕಿಗಳ ಸ್ವರಗಳ ನಡುವಿನ ಅಂತರವನ್ನು ಸೂಕ್ಷ್ಮವಾಗಿ ಗಮನಿಸಿ.
ಎರಡೂ ಪ್ರಭೇದಗಳು ಇತರ ಕರೆಗಳನ್ನು ಸಹ ಹೊಂದಿವೆ, ವಿಶೇಷವಾಗಿ ‘ಟಿಕ್’ ಮತ್ತು ಕೆಲವೊಮ್ಮೆ ಅಳಿಲಿನಂತಹ “ಚೀಪ್”.
ಕಾಶ್ಮೀರಿ ನೊಣಹಿಡುಕ:
ಕೊಕ್ಕು:
ಸಾಮಾನ್ಯವಾಗಿ ಕಾಶ್ಮೀರಿ ನೊಣಹಿಡುಕದ ಕೊಕ್ಕು ಕಪ್ಪು ಬಣ್ಣದಾಗಿದ್ದು, ಕೆಳ ದವಡೆ (ಅದರ ಕೆಳಗಿನ ಅರ್ಧ ಕೊಕ್ಕು) ತೆಳು/ ಹಳದಿ ಬಣ್ಣವನ್ನು ಹೊಂದಿರುತ್ತದೆ. ಆದಾಗ್ಯೂ ಕೊಕ್ಕಿನ ಬಣ್ಣವು ಗಾಢ ಹಳದಿಯಿಂದ ಸಂಪೂರ್ಣವಾಗಿ ತೆಳು/ಹಳದಿ ಬಣ್ಣಕ್ಕೆ ಬದಲಾಗಬಹುದು. ವಯಸ್ಕ ಗಂಡು ಸಾಮಾನ್ಯವಾಗಿ ಈ ವಿಶಿಷ್ಟವಾದ ಸಂಪೂರ್ಣ ತೆಳು/ ಹಳದಿ ಬಣ್ಣದ ಕೊಕ್ಕನ್ನು ಹೊಂದಿರುತ್ತದೆ.
ಗರಿಪುಕ್ಕಗಳು:
ವಯಸ್ಕ ಗಂಡು ಕಾಶ್ಮೀರಿ ನೊಣಹಿಡುಕದ ಗಂಟಲು ಮತ್ತು ಎದೆಯ ಮೇಲೆ ಗಾಢ ಕಂದು ಬಣ್ಣದಾಗಿದ್ದು, ಎದೆಯು ನೆತ್ತರುಗಲ್ಲ ಮತ್ತು ಬೂದು ನೆತ್ತರುಗಲ್ಲಕಿಂತಲೂ ಹೆಚ್ಚು ವಿಸ್ತಾರವಾಗಿರುತ್ತದೆ ಮತ್ತು ಎದೆಯ ಮೇಲ್ಭಾಗದ ಮೇಲೆಲ್ಲಾ ದಪ್ಪ ಕಪ್ಪು ಮಲಾರ್ ಗೆರೆಯ ಅಂಚನ್ನು ಹೊಂದಿರುತ್ತದೆ. ವಯಸ್ಕ ಹೆಣ್ಣಿನ ಮೇಲ್ಭಾಗ ತೆಳು ಕಂದು ಮತ್ತು ಎದೆಭಾಗ ಗಾಢ ಕಂದು ಬಣ್ಣದ್ದಾಗಿದೆ (ಕೆಲವೊಮ್ಮೆ ಶಲ್ಕ ಮತ್ತು ಗೆರೆ ಎಳೆದ ಹಾಗೆ ಕಾಣುತ್ತದೆ). ಅದು ಸಾಮಾನ್ಯವಾಗಿ ಕೆಳ ಹೊಟ್ಟೆ ಮತ್ತು ಪಾರ್ಶ್ವಗಳಿಗೆ ವಿಸ್ತರಿಸುತ್ತದೆ. ಯುವ ವಯಸ್ಕ ಗಂಡುಗಳು ವೈವಿಧ್ಯಮಯ ರೆಕ್ಕೆಗಳನ್ನು ಹೊಂದಿರುತ್ತದೆ ಮತ್ತು ಕೆಲವು ಹೆಣ್ಣುಗಳಂತೇ ಕಾಣಿಸಬಹುದು ಅಥವಾ ಇತರ ವಯಸ್ಕ ಗಂಡಿನ ಗಂಟಲಿನ ಮೇಲೆ ಇರುವಂತೆ ಕಂದು ಬಣ್ಣವನ್ನು ಹೊಂದಿರಬಹುದು.
ಸೂಚನೆ: ಯುವ ವಯಸ್ಕ ಕಾಶ್ಮೀರಿ ನೊಣಹಿಡುಕ ಕಪ್ಪು ಮಲಾರ್ ಗೆರೆಯನ್ನು ಹೊಂದಿರುವುದಿಲ್ಲ ಹಾಗೂ ಬದಲಿಗೆ ಅದರ ಕಂದು ಬಣ್ಣದ ಒಳಭಾಗಕ್ಕೆ ಬೂದು ಬಣ್ಣದ ಅಂಚನ್ನು ಹೊಂದಿದ್ದು, ಅದು ನೆತ್ತರುಗಲ್ಲ ನೊಣಹಿಡುಕವನ್ನು ಹೋಲುತ್ತದೆ. ಆದಾಗ್ಯೂ ಕಾಶ್ಮೀರಿ ನೊಣಹಿಡುಕದಲ್ಲಿ ಕಂದು ಒಳಭಾಗಗಳು ಸಾಮಾನ್ಯವಾಗಿ ಹೆಚ್ಚು ವಿಸ್ತಾರವಾಗಿರುತ್ತವೆ.
ಗಂಡು ಕಾಶ್ಮೀರಿ ನೊಣಹಿಡುಕ
ಯುವ ಗಂಡು ಕಾಶ್ಮೀರಿ ನೊಣಹಿಡುಕ
ಹೆಣ್ಣು ಹಕ್ಕಿಗಳ ಬಾಲದ ಮೇಲ್ಭಾಗದ ಕೊವರ್ಟ ಗಾಢವಾಗಿದ್ದು, ಅದು ಅದರ ಗಾಢ ಬಾಲದೊಂದಿಗೆ (ಬೂದು ನೆತ್ತರುಗಲ್ಲ ನೊಣಹಿಡುಕದಂತೆ) ಹೋಲಿಕೆಯಾಗುತ್ತದೆ ಮತ್ತು ಕೆಲವೊಮ್ಮೆ ಎದೆಯ ಮೇಲೆ ತಿಳಿ ಕಂದು ಬಣ್ಣ ಕಾಣುತ್ತದೆ.
ಕಾಶ್ಮೀರಿ ನೊಣಹಿಡುಕದ ಎದೆಯ ಮೇಲೆ ತಿಳಿ ಕಂದು ಬಣ್ಣ ಇರುವುದನ್ನು ಗಮನಿಸಿ.
ಕರೆ:
ಮೊದಲೇ ತಿಳಿಸಿರುವಂತೆ ಕಾಶ್ಮೀರಿ ನೊಣಹಿಡುಕದ ಕರೆಯು ನೆತ್ತರುಗಲ್ಲದ ನೊಣಹಿಡುಕಕ್ಕೆ ಹೋಲುತ್ತದೆ. ಕಾಶ್ಮೀರಿ ನೊಣಹಿಡುಕ ‘ಈಪ್ ಈಪ್’ ಎಂಬ ವಿಶಿಷ್ಟ ಕರೆಯನ್ನು ಕೂಗುತ್ತದೆ. ಇದು ನಾವು ಸಾಮಾನ್ಯವಾಗಿ ಕೇಳುವ ನೆತ್ತರುಗಲ್ಲದ ನೊಣಹಿಡುಕದ ‘ಟ್ಸೀಪ್ ಟ್ಸೀಪ್’ ಕರೆಗೆ ಹೋಲುತ್ತದೆ ಆದರೆ ಅದನ್ನು ರೋಹಿತ ರೇಖ (http://indianbirds.in/pdfs/IB7.6_Ganpule_KashmirFlycatcher.pdf) ಆಧಾರದ ಮೇಲೆ ಪ್ರತ್ಯೇಕಿಸಬಹುದು. ಕಾಶ್ಮೀರಿ ನೊಣಹಿಡುಕದ ಕರೆಯು ಎತ್ತರದ ಸ್ಥರದಲ್ಲಿ ಇರುತ್ತದೆ ಆದರೆ ನೆತ್ತರುಗಲ್ಲ ನೊಣಹಿಡುಕದ ಸ್ಥರದಲ್ಲಿ ಇರುವುದಿಲ್ಲ.
ನಡವಳಿಕೆ:
ಕಾಶ್ಮೀರಿ ನೊಣಹಿಡುಕ ಕೆಲವೊಮ್ಮೆ ವೇಗವಾಗಿ ತನ್ನ ಬಾಲವನ್ನು ಪದೇ ಪದೇ ಜೋರಾಗಿ ಬೀಸುತ್ತಿರುತ್ತದೆ, ಇತರ ಎರಡು ನೊಣಹಿಡುಕಗಳಲ್ಲಿ ಈ ತರಹದ ನಡುವಳಿಕೆ ಕಂಡುಬರುವುದಿಲ್ಲ. ಆದ್ದರಿಂದ ನೊಣಹಿಡುಕವು ತನ್ನ ಬಾಲವನ್ನು ಪದೇ ಪದೇ ಬೀಸುವುದು ನೋಡಿದರೆ, ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ಏಕೆಂದರೆ ಅದು ಅಪರೂಪದ ಕಾಶ್ಮೀರಿ ನೊಣಹಿಡುಕವಾಗಿರುವ ಸಾಧ್ಯತೆ ಇದೆ!
ಕಾಶ್ಮೀರದ ನೊಣಹಿಡುಕ ಬಾಲ ಬೀಸುವಿಕೆ
ಸಮಾರೋಪ:
ಈ ಲೇಖನವು ನೊಣಹಿಡುಕ ಗುರುತಿಸುವಿಕೆಗೆ ಸಹಾಯ ಮಾಡುವ ಪ್ರಮುಖ ವೈಶಿಷ್ಟ್ಯಗಳನ್ನು ವಿವರಿಸುತ್ತದೆಯಾದರೂ, ಪ್ರತ್ಯೇಕವಾಗಿ ಪರಿಗಣಿಸಿದಾಗ ಈ ವೈಶಿಷ್ಟ್ಯಗಳಲ್ಲಿ ಅನೇಕವು ಸಾಕಾಗುವುದಿಲ್ಲ ಎಂಬುದನ್ನು ನೆನಪಿಡಿ. ಈ ಮೂರು ಒಂದೇ ರೀತಿಯ ನೊಣಹಿಡುಕಗಳನ್ನು ಪ್ರತ್ಯೇಕಿಸಲು ನೀವು ಸಾಮಾನ್ಯವಾಗಿ ಈ ಎಲ್ಲಾ ವೈಶಿಷ್ಟ್ಯಗಳ ಸಂಯೋಜನೆಯನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಗಾಢ ಕಪ್ಪು ಬಣ್ಣದ ಕೊಕ್ಕನ್ನು ಹೆಣ್ಣಿನ ಎಲ್ಲಾ ಮೂರು ಜಾತಿಯ ನೊಣಹಿಡುಕಗಳಲ್ಲಿ ಕಾಣಬಹುದು ಆದರೆ, ಬಾಲದ ಮೇಲ್ಭಾಗದ ಗಾಢ ಕೊವರ್ಟ ಮತ್ತು ‘ಡ್ರ್ರ್ರ್ರ್ಟ್’ ಎಂದು ಕರೆದರೆ (ಎಲ್ಲಾ ಸ್ವರಗಳು ಕೂಡಿದಂತೆ) ಅದು ಹೆಣ್ಣು ಬೂದು ನೆತ್ತರುಗಲ್ಲ ನೊಣಹಿಡುಕವಾಗಿರತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ, ಫಿಸೆಡುಲಾ (Ficedula) ಪ್ರಬೇಧದ ನೊಣಹಿಡುಕಗಳು ತುಂಬಾ ಸಕ್ರಿಯವಾಗಿರುವ ಪಕ್ಷಿಗಳು ಮತ್ತು ಸರಿಯಾಗಿ ನೋಡಲು ಸಹಕರಿಸುವುದಿಲ್ಲ. ಕೆಲವೊಮ್ಮೆ ದಟ್ಟಕಾಡಿನಲ್ಲಿ ಹಾದುಹೋಗುವ ಕೆಲ ಕ್ಷಣಗಳ ನೋಟವಷ್ಟೇ ನಿಮಗೆ ಸಿಗಬಹುದು. ಅಂತಹ ಸಂದರ್ಭಗಳಲ್ಲಿ ಆ ಹಕ್ಕಿಯು ಬೂದು ನೆತ್ತರುಗಲ್ಲ / ನೆತ್ತರುಗಲ್ಲ ಅಥವಾ ‘ಫಿಸೆಡುಲಾ ಜಾತಿ’ (Ficedula sp.) ಎಂದು ಮಾತ್ರ ಗುರುತಿಸಬಹುದು ಮತ್ತು ಅಂತಹ ಹಕ್ಕಿಗಳನ್ನು ಮುಂದಿನ ಬಾರಿ ಇನ್ನಷ್ಟು ಹೆಚ್ಚಿನ ಜಾಗರೂಕತೆಯಿಂದ ನೋಡಬೇಕಿರುತ್ತದೆ.
ನಿಮ್ಮ ಪಕ್ಷಿ ವೀಕ್ಷಣೆ ಮತ್ತು ಹಕ್ಕಿಗಳ ಗುರುತಿಸುವಿಕೆ ಇನ್ನಷ್ಟು ಸುಗಮವಾಗಿ ಸಾಗಲಿ…
Header Image: Red-breasted Flycatcher by Fareed Mohmed/Macaulay Library
This article is available in Hindi, Marathi, and English